Monday, December 31, 2012

ಪರಿಸರ


                                               ಪರಿಸರ


  1. ಹಸಿರೆಲೆಗಳ ನಡುವೆ ರವಿಯ ಮೊದಲ ಕಿರಣ ಜಾರಿದಾಗ

    ಮುಂಜಾವ ಮಂಜಿನ ಮುತ್ತ ಹನಿ ಹೊಳೆದಾಗ 
    ಸೂಜಿ ಮಲ್ಲಿಗೆ ಹೂ ನಸುನಾಚಿ ನಕ್ಕಾಗ 
    ತಟ್ಟನೆ ಸುಳಿಯುವುದು ನಿನ್ನ ನೆನಪು
    ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು



    ಸಂಜೆ ಸೂರ್ಯನು ಭಾನಲಿ ಬಣ್ಣಗಳ ಚಿತ್ತಾರ ಬರೆದಾಗ 
    ತಂಗಾಳಿಯ ಸುಳಿಯೊಂದು ಚಳಿಯ ಕಚಗುಳಿಯಿಟ್ಟಾಗ 
    ಸಂಜೆ ಮಲ್ಲಿಗೆ ಹೂ ಅರೆಬಿರಿದು ನಕ್ಕಾಗ 
    ಮತ್ತೆ ಮನದಿ ನುಸುಳುವುದು ನಿನ್ನ ನೆನಪು 
    ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು




    ತಿಳಿನೀಲ ಆಗಸದಿ ಪೌರ್ಣಿಮೆಯ ಶಶಿ ವಿರಮಿಸಿದಾಗ 
    ಬೆಳ್ಳಿ ಬೆಳದಿಂಗಳಲಿ ಇಳೆಯು ವ್ಯಯ್ಯಾರದಿ ನಕ್ಕಾಗ 
    ರಾತ್ರಿ ರಾಣಿಯು ಅರಳಿ ಘಮ ಘಮಿಸಿ ಮತ್ತೇರಿಸಿದಾಗ
    ಚಿತ್ತವನು ಸೆಳೆಯುವುದು ನಿನ್ನ ನೆನಪು
    ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು




    ನನ್ನ ಏಕಾಂತದ ಸಂಭ್ರಮವು ನಿನ್ನ ನೆನಪು
    ಆಂತರ್ಯವು ಮಿಡಿದ ಆಲಾಪ ನಿನ್ನ ನೆನಪು 
    ಕಂಗಳಲಿ ಮಿನುಗುತಿಹ ಹೊಸ ಹೊಳಪು ನಿನ್ನ ನೆನಪು
    ಹೃದಯದಲಿ ಮೂಡಿರುವ ಹೊಸ ಹುರುಪು ನಿನ್ನ ನೆನಪು 
    ಅನುಕ್ಷಣದ ಆಹ್ಲಾದ ನಿನ್ನ ನೆನಪು ಮನದ ಹೊಸ ಉಲ್ಲಾಸ ನಿನ್ನ ನೆನಪು

    ಅನುದಿನವೂ ಅಲೆಯಂತೆ ಮರಳುವುದು ನಿನ್ನ ನೆನಪು
    ಅಲೆ ಅಲೆಯಾಗಿ ಸುಳಿಯೊಳಗೆ ಸೆಳೆಯುವುದು ನಿನ್ನ ನೆನಪು 
    ನೆರಳಿನಂತಹ ಜೊತೆಗಾತಿ ನಿನ್ನ ನೆನಪು
    ಹಿತವಾಗಿ ಕಾಡುತಿದೆ ನಿನ್ನ ನೆನಪು                                                                  
    ಮೈಮರೆಸಿ ನಗಿಸುತಿದೆ ನಿನ್ನ ನೆನಪು